ದೇಪರಾಜ:-
ಕ್ರಿ.ಶ.೧೪೧೦. ಈತ ಸೊಬಗಿನ ಸೋನೆ ಮತ್ತು ಅಮರುಕ-ಈ ಗ್ರಂಥಗಳನ್ನು ಬರೆದಿದ್ದಾನೆ. ಈಗ ದೊರೆತಿರುವಂತೆ ಸೊಬಗಿನ ಸೋನೆಯೇ ಮೊದಲ ಸಾಂಗತ್ಯ ಗ್ರಂಥವೆಂದೂ ದೇಪರಾಜ ಪ್ರಥಮ ಸಾಂಗತ್ಯಕಾರನೆಂದೂ ಹೇಳಲಾಗಿದೆ.  ಗ್ರಂಥದಲ್ಲಿ 
		ಸಂಗಮೇದ್ರನ ಕುಲದಿಂಗಡಲಿಗೆ ಸೆರೆ|
		ದಿಂಗಳೆನಿಪ ಕಂಪಸುತ ಕೇಳ
		ಕಂಗೊಳಿಸುವ ದೇಪನೃನ ಮುನ್ನರಿಯದ|
		ಮಂಗಳವಪ್ಪೊಂದು ಕಥೆವೇಳ|.

	ಎಂದು ದೇಪರಾಜನನ್ನು ಆತನ ನಲ್ಲೆ ಕೇಳಿಕೊಳ್ಳುತ್ತಾಳೆ. ಇದರಿಂದ ಕವಿ ಸಂಗಮ ವಂಶದ ಕಂಪರಾಜನ ಮಗನೆಂದು ತಿಳಿದುಬರುತ್ತದೆ. ಈ ಸಂಗವವಂಶ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಮನೆತನಗಳಲ್ಲಿ ಒಂದಾಗಿದೆ. 1406-1422ರವರೆಗೆ ಆಳಿದ ಒಂದನೆಯ ದೇವರಾಯ ಅಥವಾ ಪ್ರತಾಪದೇವರಾಯನೇ ಈ ಕಂಪಸುತ ದೇಪರಾಜ ಎಂದು ನಿರ್ಣಯಿಸಲಾಗಿದೆ. ಈತ ವೀರಶೈವನಹುದೊ ಅಲ್ಲವೋ ತಿಳಿಯದು. ಶೈವನೆಂಬುದಕ್ಕೆ ಈತನ ಗ್ರಂಥಗಳು ಆಧಾರವಾಗಿವೆ. ಕವಿ ವಾಲ್ಮೀಕಿ, ಬಾಣ, ಕಾಳಿದಾಸರನ್ನು ಬಿಟ್ಟರೆ ಮತ್ತಾರನ್ನೂ ಸ್ತುತಿಸಿಲ್ಲ.

	ಸೊಬಗಿನ ಸೋನೆ ಕಾವ್ಯದಲ್ಲಿ ಸುರಭಾವತಿ, ಕಂಜರೆ-ಮೊದಲಾದವರ ಏಳು ಕಥೆಗಳನ್ನೊಳಗೊಂಡ ಎರಡು ಸಾವಿರ ಪದ್ಯಗಳಿವೆ. ಈತನ ಸಾಂಗತ್ಯಗಳಲ್ಲಿ ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ಒಂದೊಂದು ಗುರು ಹೆಚ್ಚಾಗಿ ಬರುತ್ತದೆ ಎಂದರೆ, ಕೊನೆಯ ಬ್ರಹ್ಮಗಣಕ್ಕೆ ಬದಲಾಗಿ ವಿಷ್ಣುಗಣ ಬರುತ್ತದೆ. ಈ ಛಂದೋಪ್ರಕಾರವನ್ನೇ ಮುಂದೆ ಬಂದ ಕೆಲವು ಕವಿಗಳು ಅನುಸರಿಸಿದ್ದಾರೆ. ಇದನ್ನು ಸೊಬಗಿನ ಸೋನೆ ವರ್ಣ ಎಂದು ಕರೆದಿರುವುದೂ ಉಂಟು.

		ಎಲೆ ಪ್ರಿಯೆ ಕೇಳು ತೊಳದ ಮುತ್ತು ಕರತಳಾ
		ಮಳಕವೀ ಕಥೆ ಸೊಬಗಿನ ಸೋನೆ
		ತಿಳಿಯದೆ ಸುಯ್ದು ಮಗುಳೆ ಓದಿ ಬೇಸತ್ತು
		ತಲೆಗೊಡಹುವ ಕಬ್ಬದೊಳಗಲ್ಲ

	ಎಂದು ಕವಿ ತನ್ನ ಕಥೆಯ ಬಗ್ಗೆ ತಾನೇ ಹೆಮ್ಮೆಪಟ್ಟುಕೊಳ್ಳುತ್ತಾನೆ. ಕಾವ್ಯದಲ್ಲಿ ಅಷ್ಟಾದಶ ವರ್ಣನೆಗಳು ಇರಬೇಕೆಂಬ ನಿಯಮಕ್ಕೆ ಕವಿ ಒಳಗಾಗಿರುವಂತೆ ಕೆಲವು ವರ್ಣನೆಗಳು ಅತಿಯಾಗಿ ಕಂಡರೂ ಅಲ್ಲಲ್ಲಿ ಕಾಣುವ ಹಲವು ಭಾಗಗಳು ಕವಿಪ್ರತಿಭೆಯ ಸೂಚಕವಾಗಿವೆ.

	ಈತನ ಇನ್ನೊಂದು ಕೃತಿ ಅಮರುಕವೆಂಬುದು ಪರಿವರ್ಧಿನಿ ಷಟ್ಪದಿಯ ಮೊದಲ ಕೃತಿಯಾಗಿದೆ. ಇದು ಪ್ರಣಯ ಚಿತ್ರವನ್ನು ಅಕ್ಷರಗಳಲ್ಲಿ ಬಿಡಿಸುವ ಸಂಸ್ಕøತದ ಅಮರು ಶತಕದ ಕನ್ನಡ ಅನುವಾದವಾಗಿದೆ. 

"ಸ್ಮರರಾಜ್ಯದ ಮೈಸಿರಿ ಶೃಂಗಾರದ
ಶರನಿಧಿ "ರತಿನಾಟ್ಯದ ರಂಗಸ್ಥಳ         :ವಿರಹದ ನೆರವೀಡೋಪರ ಕೂರಾಟದ ಕೊಸರಿನ ಗೊತ್ತು |.
ಸರಸರ ಸಂತವಣಿಯ ಮನೆಸುಗ್ಗಿಯ
ಪೊರೆವಾಗರ ಭಾವಾಲಯವಪ್ಪಂ -
ತಿರೆ ಪೇಳ್ ದನ ಮರುಕವನು ದೇಪವಹೀಪತಿ ಕನ್ನಡಿಸಿ|.                      ಎಂದು ಕವಿ ಇದರ ಉತ್ಕ್ರಷ್ಟತೆಯ ಬಗ್ಗೆ ಹೇಳುತ್ತಾನೆ.
(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ